Article by M.N.Chambalthimar.

ಸಂಗೀತ ಲೋಕದ ಸ್ವರ ಸಾಮ್ರಾಟ, ಗಾನ ಗಾರುಡಿಗ, ವಾಗ್ಗೇಯಕಾರ ಡಾ.ಎಂ.ಬಾಲಮುರಳೀಕೃಷ್ಣ  ಅವರಿಗೀಗ ೮೫ರ ಹರೆಯ. ಆದರೂ ಈ ಸರಸ್ವತಿ ವರಪುತ್ರ ಸಂಗೀತಕ್ಷೇತ್ರದ ಚಿರಯುವಕನಂತೆ ೨೫ರ ತಾರುಣ್ಯದ ಲವಲವಿಕೆಯಿಂದ ಮಿರಿಮಿರಿ ಮಿಂಚುತ್ತಾ ಓಡಾಡುತ್ತಿದ್ದಾರೆ. ನಿರಂತರ ಪ್ರಯಾಣದಲ್ಲಿ ಊರಿಂದೂರಿಗೆ ಚಲಿಸುತ್ತಾ ನಾನಾ ವೇದಿಕೆಗಳಲ್ಲಿ ಸಂಗೀತ ಗಾನ ಸುಧಾರಸ ಹರಿಸುತ್ತಾ ಸಂಗೀತ ಸಮರ್ಪಿತ ಬದುಕನ್ನು ಆನಂದಿಸುತ್ತಿದ್ದಾರೆ.

 

ಮೊನ್ನೆ ನ.೭ರಂದು ಕೇರಳದ ಪಯ್ಯನ್ನೂರಿಗೆ ಸಂಗೀತ ಕಾರ್ಯಕ್ರಮಕ್ಕೆಂದು ಬಂದಿದ್ದವರು ಹಿಂತೆರಳುವ ದಾರಿ ಮಧ್ಯೆ ಕಾಸರಗೋಡಿನ ಗ್ರಾಮೀಣ ಪ್ರದೇಶದಲ್ಲಿರುವ ಬದಿಯಡ್ಕ ಬಳಿಯ ಬಳ್ಳಪದವು ‘ನಾರಾಯಣೀಯಂ’ ಮ್ಯೂಸಿಕ್ ಕ್ಯಾಂಪಸ್ಗೆ ವಿಶ್ರಾಂತಿ ಪಡೆಯಲೆಂದು ಬಂದರು. ಇದು ಅನಿರೀಕ್ಷಿತ ಆದರೂ ಮುಂಚಿತ ತಿಳಿಸಿ ಅವರಾಗಿಯೇ ಬಂದ ಸಂದರ್ಶನ. ಇತ್ತೀಚೆಗಷ್ಟೇ ಕಾಂಚಿಕಾಮಕೋಟಿ ಪೀಠದ ‘ಆಸ್ಥಾನ ವಿದ್ವಾನ್’ ಗೌರವ ಪುರಸ್ಕಾರ ಪಡೆದ ಯುವ ಪ್ರಸಿದ್ದ ಸಂಗೀತಜ್ಞ ಯೋಗೀಶ ಶರ್ಮ ಬಳ್ಳಪದವು ಅವರು ಸ್ಥಾಪಿಸಿರುವ ‘ನಾರಾಯಣೀಯಂ’ ಸಂಗೀತ ಕ್ಯಾಂಪಸ್ ಎಂದರೆ ಡಾ. ಬಾಲಮುರಳೀ ಕೃಷ್ಣ ಅವರಿಗೆ ತನ್ನ ಉಸಿರಾದ ಸಂಗೀತದಷ್ಟೇ ಪ್ರೀತಿ,  ಒಲವು. ಕಾರಣ ಇಲ್ಲಿ ಕಳೆದೆರಡು ವರ್ಷಗಳಿಂದ ತಿರುವನಂತಪುರ ಅರಮನೆಯ ಯುವರಾಜ, ಬಾಲಮುರಳಿಯವರ ನೆಚ್ಚಿನ ಶಿಷ್ಯ ಅಶ್ವತಿ ತಿರುನಾಳ್ ರಾಮವರ್ಮ ಅವರು ಬಾಲಮುರಳಿ ವಿರಚಿತ ನೂರಾರು ಕೀರ್ತನೆಗಳನ್ನು ವಿಶೇಷ ಸಂಗೀತ ಶಿಬಿರಗಳ ಮೂಲಕ ಕಲಿಸಿದ್ದಾರೆ. ಇಲ್ಲಿನ ನೂರಾರು ಸಾಧಕ ವಿದ್ಯಾರ್ಥಿಗಳಿಗೆ ಅವೆಲ್ಲವೂ ಕಂಠಸ್ಥವಾಗಿದೆ. ಡಾ. ಬಾಲಮುರಳಿ ಕೃಷ್ಣ ಅವರೇ ಸಂಶೋಧಿಸಿದ ರಾಗಗಳ ಸಹಿತ ಅವರ ಕೀರ್ತನೆಗಳು ಮುಂದಿನ ಪೀಳಿಗೆಗೆ ಈ ಸಂಸ್ಥೆಯ ಮೂಲಕ ಕೈದಾಟುತ್ತಿರುವುದರಿಂದ ಸಹಜವಾಗಿಯೇ ಬಾಲಮುರಳಿಯವರು ಹರ್ಷಿತರಾಗಿದ್ದಾರೆ.

ಹಾಗಾಗಿ ಅವರು ಆಗಾಗ್ಗೆ ಕಾಸರಗೋಡಿನ ಬದಿಯಡ್ಕದಂತಹಾ ಹಳ್ಳಿಯ ಬಳ್ಳಪದವುಗೆ ಬರುವಂತಾಗಿದ್ದಾರೆ.

ಈಗಾಗಲೇ ನಾಲ್ಕುಬಾರಿ ಇಲ್ಲಿಗೆ ಭೇಟಿ ನೀಡಿರುವ ಅವರು ಮುಂದೆಯೂ ಇಲ್ಲಿಗೆ ಬಂದು ವಾಸ್ತವ್ಯ ಹೂಡುವ ಇಂಗಿತ ಪ್ರಕಟಿಸಿದ್ದಾರೆ. ಇಲ್ಲಿಗೆ ಬಂದಾಗ ಮಕ್ಕಳೊಡನೆ ಮಗುವಾಗಿ ಹಿರಿಯಜ್ಜನಂತೆ ಬೆರೆಯುವ ಅವರ ಆತ್ಮೀಯತೆಯ ಸಾಂಗತ್ಯ ಕಂಡರೆ ಎಂತವರೂ ಬೆರಗಾಗಲೇ ಬೇಕು. ಕಾರಣ ಯಾವುದೇ ಪ್ರತಿಷ್ಟೆಗಳಿಲ್ಲದೇ ಸರಳತೆಯಿಂದ ಅವರು ವರ್ತಿಸುವ ರೀತಿ, ಸಮಗೀತ ವಿದ್ಯಾರ್ಥಿಗಳೊಡನೆ ತೋರುವ ಪ್ರೀತಿ ಅನುಭವಿಸಿಯೇ ಅರಿಯಬೇಕು. ಮೊನ್ನೆಯೂ ಹಾಗೆಯೇ ಕರ್ನಾಟಕ ಸಂಗೀತ ಕ್ಷೇತ್ರದ ಹಿರಿಯಜ್ಜ ಬಾಲಮುರಳಿ ಮೊಮ್ಮಕ್ಕಳಿಗೆ ಪಾಠ ಮಾಡಿದರು. ಮಾತನಾಡಿಸಿದ ಮಕ್ಕಳ ಗಲ್ಲ ಹಿಡಿದು, ಬೆನ್ತಟ್ಟಿ ಮುದ್ದಾಡಿದರು. ಹಾಸ್ಯ ಚಟಾಕಿ ಹಾರಿಸಿ ನಗಿಸಿದರು. ಸಂಗೀತ ಕ್ಷೇತ್ರದ ಪ್ರಾಥಮಿಕ ವಿದ್ಯಾರ್ಥಿಗಳಿಗೆಲ್ಲಾ ಇದೊಂದು ಅನ್ಯತ್ರ ಅಲಭ್ಯ ಜೀವನ ಸೌಭಾಗ್ಯ. ಅವರ ಬದುಕಿಡೀ ಮಧುರ ಸ್ಮರಣೆಗಳಾಗಿ ಉಳಿಯುವ, ಸಂಗೀತ ಸಾಧನೆಯ ಸ್ಪೂರ್ತಿಕಣ.

ಇಷ್ಟಕ್ಕೂ ಸಂಗೀತಜ್ಞ ಯೋಗೀಶ ಶರ್ಮ ಬಳ್ಳಪದವು ಸ್ತಾಪಿಸಿರುವ ‘ನಾರಾಯಣೀಯಂ’ ಮ್ಯೂಸಿಕ್ ಕ್ಯಾಂಪಸ್ ಕೇವಲ ಒಂದು ಸಂಗೀತ ಶಾಲೆಯಲ್ಲ.  ಇದೊಂದು ಕ್ಯಾಂಪಸ್. ಇಲ್ಲಿ ಅತ್ಯಾಧುನಿಕವಾದ ಹವಾ ನಿಯಂತ್ರಿತ ವ್ಯವಸ್ಥೆಯ ಕೊಠಡಿಗಳೊಂದಿಗೆ ರೆಕಾರ್ಡಿಂಗ್ ಸೌಲಭ್ಯಗಳೂ ಇವೆ. ಸಂಗೀತ ಸಂಬಂಧಿ ಅಕಾಡೆಮಿಕ್ ಶಿಕ್ಷಣದ ವ್ಯವಸ್ಥೆಗಳಿವೆ.  ತಿರುವನಂತಪುರದ ‘ಕುದಿರಮಾಳಿಗ’ ಅರಮನೆಯ ತದ್ರೂಪಿನಲ್ಲೇ ಚಿಕ್ಕ ಮಾದರಿಯಲ್ಲಿ ‘ನಾರಾಯಣೀಯಂ’ ತಲೆ ಎತ್ತಿದೆ. ಇಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ವಿಶೇಷ ಸಂಗೀತ ಸಾಧನಾ ಶಿಬಿರಗಳು ನಡೆಯುತ್ತವೆ. ತಿರುವನಂತಪುರದ ಯುವರಾಜ ಅಶ್ವತಿ ತಿರುನಾಳ್ ರಾಮವರ್ಮ, ತಿರುವನಂತಪುರ ಸ್ವಾತಿ ತಿರುನಾಳ್ ಸಂಗೀತ ಕಾಲೇಜಿನ ಪ್ರಾಂಶುಪಾಲ ಕೆ.ವೆಂಕಟರಮಣ ಸೇರಿದಂತೆ ಪ್ರಸಿದ್ದರು ಇಲ್ಲಿ ಶಿಬಿರ ಮುನ್ನಡೆಸುತ್ತಾರೆ.

ಈ ಸಾಧನೆಯನ್ನೆಲ್ಲಾ ಮನಗಂಡು ಡಾ.ಬಾಲಮುರಳಿಯವರು ಇಲ್ಲಿನ ಬಗ್ಗೆ ಒಲವು ಹೊಂದಿದ್ದಾರೆ. ಇತ್ತೀಚೆಗೆ ನಾಲ್ಕು ತಿಂಗಳ ಹಿಂದೆಯಷ್ಟೇ ಇಲ್ಲಿಗೆ ಬಂದು ಮರಳಿದ್ದ ಬಾಲಮುರಳಿ ಕರಾವಳಿಗೆ ಬಂದಾಗಲೆಲ್ಲಾ ಇಲ್ಲಿಗೆ ಬಂದೇ ಬರುತ್ತಾರೆ. ಕಾರಣ ಅವರ ರಾಗ, ಕೀರ್ತನೆಗಳೆಲ್ಲಾ ಇಲ್ಲಿನ ವಿದ್ಯಾರ್ಥಿಗಳ ಕಂಠದಲ್ಲಿದೆ…ಹಾಗಾಗಿ ಡಾ.ಬಾಲಮುರಳಿಕೃಷ್ಣರಿಗೆ ಮತ್ತೂ ಮತ್ತೂ ಬರುವ ತುಡಿತ.

ಲೇಖನ; ಎಂ.ನಾ.ಚಂಬಲ್ತಿಮಾರ್
ಚಿತ್ರ: ಉದಯ ಕಂಬಾರ್